ಬೌದ್ಧ ಧರ್ಮದ ಇತಿಹಾಸ

	ಬೌದ್ಧ ಧರ್ಮದ ಇತಿಹಾಸ ಶಾಕ್ಯಮುನಿಯ ಪ್ರಥಮ ದೇಶನವಾದ ಧರ್ಮಚಕ್ರ ಪ್ರರ್ವತನಸೂತ್ರದಿಂದ ಆರಂಭವಾಯಿತು ಎನ್ನಬಹುದು. ಬುದ್ಧನಿಗೆ ಸಂಬೋಧಿ ಪ್ರಾಪ್ತವಾದ ಅನಂತರ ಅದನ್ನು ಲೋಕಕ್ಕೆ ಪ್ರಕಟಪಡಿಸುವುದೋ ಬೇಡವೋ ಎಂಬ ಸಂದೇಹ ಬುದ್ಧನಿಗಿದ್ದಿತೆಂದೂ ಬ್ರಹ್ಮಾಸಹಂಪತಿಯ ಆಗ್ರಹಪೂರಿತವಾದ ಪ್ರಾರ್ಥನೆಯಿಂದ ಬುದ್ಧ ಗಯಾ ಶೀರ್ಷದಿಂದ ತಾತ್ಪರ್ಯ ವಿವರಿಸಿದ. ಅವರು ಶಿಷ್ಯರಾದರು. ಯಶನೆಂಬ ಶ್ರೀಮಂತ ತರುಣ ಹಾಗೂ ಅವನ ನಾಲ್ವರು ಸಂಗಾತಿಗಳು ಶಿಷ್ಯರಾದರು. ಐನೂರು ಮಂದಿ ಇತರರೂ ಸೇರಿದರು. ಹೀಗೆ ಶಾಕ್ಯಮುನಿಯ ಸಂಘ ರೂಪ ತಳೆದದ್ದು ಮಾತ್ರವಲ್ಲ, ಬೆಳೆಯಿತು. ಅಲ್ಲಿಂದ ಮುಂದೆ ನಲವತ್ತು ವರ್ಷಗಳ ಕಾಲ ಬುದ್ಧ ಅಲ್ಲಲ್ಲಿ ಅಲೆದಾಡುತ್ತ ಧರ್ಮಬೋಧೆ ಮಾಡುತ್ತ ತನ್ನ ವ್ಯಕ್ತಿತ್ವದ ಪ್ರಭಾವದಿಂದ ಧರ್ಮದ ಮೇಲ್ಮೆಯಿಂದ ಸಂಘವನ್ನು ರೂಢಿಸಿದ. ಕುಶೀನಾರದಲ್ಲಿ ಕ್ರಿ.ಪೂ. 485ರಲ್ಲಿ ಬುದ್ಧ ತೀರಿಕೊಂಡಾಗ ಅವನ ಅವಶೇಷಕ್ಕಾಗಿ ಪಾವಾದ ಮಲ್ಲರು, ಕುಶೀನಾರದ ಮಲ್ಲರು, ವೈಶಾಲಿಯ ಲಿಚ್ಛವಿಗಳು, ಕಪಿಲವಸ್ತುವಿನ ಶಾಕ್ಯರು, ಪಿಪ್ಪಲವನದ ಮೌರ್ಯರು, ಅಲ್ಲಕಪ್ಪದ ಬುಲಿಗಳು ಪಾಲು ಬೇಡುವಷ್ಟು ಆತ ಪ್ರಭಾವಶಾಲಿಯಾಗಿದ್ದ. ಆದರೆ ಅದು ಚಾತುದ್ದಿಸ-ಭಿಕ್ಖುಸಂಘವಾಗಿದ್ದಿತು. ಬುದ್ಧನ ವ್ಯಕ್ತಿತ್ವವೇ ಅವರನ್ನೆಲ್ಲ ಒಂದುಗೂಡಿಸಿದ್ದಿತು. ಸಂಘದ ನಿರ್ದೇಶ ಅದರ ಶಾಸ್ತಾರನಿಂದ (ಸತ್ತಾಗ) ಆಗುತ್ತಿದ್ದಿತಾಗಿ ಬೌದ್ಧಸಂಘವನ್ನು ಶಾಕ್ಯಪುತ್ರ ಶ್ರಮಣರ ಸಂಘವೆಂದು ವ್ಯವಹರಿಸುತ್ತಿದ್ದರು.

	ಆದರೆ ಬುದ್ಧ ತೀರಿಕೊಂಡಂದು ಸಂಘವನ್ನು ಒಡೆಯದೆ ಉಳಿಸುವ ಅಗತ್ಯವಿತ್ತು. ಈ ಅಗತ್ಯವನ್ನು ಸೂಚಿಸುವ ಸಂದರ್ಭವೊಂದು ಒದಗಿದಂತೆ ಸಂಪ್ರದಾಯ ಹೇಳುತ್ತದೆ. ಬುದ್ಧ ತೀರಿಕೊಂಡ ಸಮಯದಲ್ಲಿ ಭಿಕ್ಷುಗಳು ಅಳುತ್ತಿದ್ದಾಗ ಸುಭದ್ರನೆಂಬ ಹಿರಿಯ ಭಿಕ್ಷುವೊಬ್ಬ ಅಳಬೇಡಿ, ಈ ಮಹಾಶ್ರಮಣನಿದ್ದಾಗ ಹೀಗೆ ಮಾಡಿ, ಹಾಗೆ ಮಾಡಬೇಡಿ ಎಂದು ನಿರ್ಬಂಧ ಪಡಿಸುತ್ತಿದ್ದ. ಈಗ ನಾವು ಬೇಕಾದುದನ್ನು ಮಾಡಬಹುದು, ಬೇಡವಾದುದನ್ನು ಬಿಡಬಹುದು ಎಂದು ಹೇಳಿದನೆಂತೆ. ಈ ದೃಷ್ಟಿ ಇತರರನ್ನು ಕಾತರಗೊಳಿಸಿತು. ಬೇಗನೆ ಸಂಘವನ್ನು ಹೇಗಾದರೂ ವ್ಯವಸ್ಥೆಗೊಳಿಸದಿದ್ದರೆ ಸಂಘ ಒಡೆಯುವುದೆಂದು ಭಯಗೊಂಡ ಅವರು ಅದೇ ವರ್ಷಋತುವಿನಲ್ಲಿ ರಾಜಗೃಹದ ಪರಿಸರದಲ್ಲಿ ಸಂಗೀತಿಯೊಂದನ್ನು ನಡೆಸಿ ಬುದ್ಧವಚನವೆಲ್ಲ ಕ್ರೋಡೀಕರಿಸಿ ವಿನಯ ಪಿಟಕವನ್ನೂ ಸುತ್ತಪಿಟಕವನ್ನೂ ಅಭಿಧಮ್ಮದ ಮಾತೃಕೆಗಳನ್ನೂ ಸಿದ್ಧಗೊಳಿಸಿದರು. ಏಕೆಂದರೆ ಬುದ್ಧನೇ ಆನಂದನಿಗೆ ಹೇಳಿದ್ದ_ ನಾನು ತೀರಿಕೊಂಡಮೇಲೆ ಶಾಸ್ತøವಿನ ಪ್ರವಚನ ಮರೆಯಾಯಿತು. ನಮಗೆ ಇನ್ನು ಶಾಸ್ತಾರನಿಲ್ಲ (ಅತೀತಸತ್ಥುಕಂ ಪಾವಚನಂ ನ ಅತ್ತಿ ನೋ ಸತ್ಥಾ) ಎಂದು ನಿಮಗೆ ಅನಿಸಬಹುದು. ಆದರೆ ಅದು ತಪ್ಪು. ನಾನು ಹೇಳಿದ ಧರ್ಮವೂ ವಿನಯವೂ ನಾನು ಗತಿಸಿದ ಬಳಿಕ ನಿಮಗೆ- (ಯೋ ಮಯಾ ಧಮ್ಮೋ ಚ ವಿನಯೋ ಚ ದೇಸಿತೋ ಪಙ್ಚತ್ತೋ ನೋಮೋ ಮಂ ಅಚ್ಚಯೇನ ಸತ್ಥಾ)" ಎಂದು. ಅದು ಕಾರಣ ಬುದ್ಧ ತೀರಿಕೊಂಡ ಅನಂತರ ಧಮ್ಮವನ್ನು ರಾಜಗೃಹದ ಸಂಗೀತಿಯಲ್ಲಿ ಸಿದ್ಧಪಡಿಸಿದರು. ಇದು ಬೌದ್ಧಧರ್ಮದ ಇತಿಹಾಸದಲ್ಲಿ ಎರಡನೆಯ ಹೆಜ್ಜೆ. ಈಗ ಬುದ್ಧನೇ ಶಾಸ್ತ್ರವಾಗಿ ಉಳ್ಳ ಸಂಘಕ್ಕೆ ವಿನಯವೂ, ಧರ್ಮವೂ ಶಿಕ್ಷೆಯೂ (ಸಿಕ್ಖಾ) ವ್ಯವಸ್ಥಿತವಾದವು.

	ಕ್ರಮೇಣ ಈ ಸಂಘದಲ್ಲಿ ಹತ್ತು ವಿವರಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಎರಡನೆಯ ಸಂಗೀತಿ ನಡೆಯಬೇಕಾಯಿತು. ವೈಶಾಲಿಯಲ್ಲಿ ನಡೆದ ಈ ಸಂಗೀತಿ ಬುದ್ಧ ತೀರಿಕೊಂಡ ನೂರು ವರ್ಷಗಳ ಅನಂತರ ಜರಗಿತೆಂದು ಸಂಪ್ರದಾಯದ ನಂಬಿಕೆ. ಇದರ ಐತಿಹಾಸಿಕ ವಿವರಗಳು ಉಪಲಬ್ಧವಿಲ್ಲ. ಅಂತೂ ಪಕ್ಷಗಳು, ಶಾಖೆಗಳು ಬೆಳೆದುಬರುತ್ತಿದ್ದಂತೆ ತೋರುತ್ತದೆ. ಬುದ್ಧನ ಸಂಘ ಹದಿನೆಂಟು ಕವಲುಗಳಾಗಿ ಒಡೆಯುವ ಸ್ಥಿತಿಯಲ್ಲಿದ್ದಿತಂತೆ. ಆ ವೇಳೆಗೆ ಬುದ್ಧ ತೀರಿಕೊಂಡು 236 ವರ್ಷಗಳಾಗಿದ್ದುವು. ಅಶೋಕಚಕ್ರವರ್ತಿ (ಕ್ರಿ.ಪೂ. 269-233) ಭಾರತದ ರಾಜನಾಗಿದ್ದ. ಆಗ ತಿಸ್ಸಮೊಗ್ಗಲಿಪುತ್ತನೆಂಬ ಭಿಕ್ಷು ಪಾಟಲೀಪುತ್ರದಲ್ಲಿ ಮಹಾಸಂಗೀತಿಯನ್ನು ಏರ್ಪಡಿಸಿ ಥೇರವಾದದ (ಸ್ಥವಿರವಾದ) ಪ್ರಕಾರ ತ್ರಿಪಿಟಕವಾಙ್ಮಯ ಸಿದ್ಧಪಡಿಸಿದ. ಈ ಭಿಕ್ಷು ಬುದ್ಧನಿಂದ ಆರನೆಯ ವಿನಯಾಚಾರ್ಯ (ಬುದ್ಧ ಉಪಾಲಿ, ದಾಸಕ, ನೋಣಕ, ಸಿಗ್ಗವ ಇವರು ಹಿಂದಿನವರು). ಅಶೋಕನ ಪಟ್ಟಾಭಿಷೇಕ ಸಮಯದಲ್ಲಿ ಇವನಿಗೆ 60 ವರ್ಷ ವಯಸ್ಸು, ಆಮೇಲೆ ಇಪ್ಪತ್ತಾರು ವರ್ಷ ಬದುಕಿದ್ದ. ಇವನಿಗೆ ಉಪಗುಪ್ತನೆಂದೂ ಹೆಸರಿತ್ತು.

	ಅಶೋಕನ ತಂದೆ ಬಿಂದುಸಾರ ವೈದಿಕಧರ್ಮದ ಪಕ್ಷಪಾತಿಯಾಗಿದ್ದನೆಂದೂ ಅಶೋಕ ಅಭಿಷಿಕ್ತನಾದ ಮೂರುವರ್ಷಗಳ ತನಕ ವೈದಿಕ ಧರ್ಮದಲ್ಲಿದ್ದನೆಂದೂ ನಾಲ್ಕನೆಯ ವರ್ಷ ನ್ಯಗ್ರೋಧನೆಂಬ ಶ್ರಾಮಣೇರನ ಪ್ರಭಾವದಿಂದ ಬೌದ್ಧ ಉಪಾಸಕನಾದನೆಂದೂ ಪಾಳಿಯ ದೀಪವಂಸ ಹೇಳುತ್ತದೆ. ಬೌದ್ಧಧರ್ಮದ ಇತಿಹಾಸದಲ್ಲಿ ಅಶೋಕ ಬುದ್ಧ ಬಾಳಿಗೆ ಸಂಬಂದಿಸಿದ ಕ್ಷೇತ್ರಗಳ ದರ್ಶನ ಮಾಡಿ, ಅಲ್ಲೆಲ್ಲ ಸ್ಮಾರಕಸ್ತಂಭ ನೆಡಿಸಿ, ನೂರಾರು ಸ್ತೂಪ ಕಟ್ಟಿಸಿದ. ಬೌದ್ಧ ಧರ್ಮದ ವಿವರಗಳನ್ನು ಶಿಲಾಶಾಸನಗಳ ಮೂಲಕ ನಾಡಿನಲ್ಲೆಲ್ಲ ಪ್ರಚಾರಮಾಡಿದ. ಧರ್ಮಪ್ರಚಾರ ಮಾಡಲು ಧರ್ಮಮಹಾಮಾತ್ರರೆಂಬ ಅಧಿಕಾರಿಗಳನ್ನು ನಿಯಮಿಸಿದ. ಯುವರಾಜನಾಗಿದ್ದ ಈತನ ತಮ್ಮ ತಿಷ್ಯ ಸಂಘಕ್ಕೆ ಸೇರಿದ್ದ. ಈತನ ಮಗ ಮಹೇಂದ್ರ ಮಗಳು ಸಂಘಮಿತ್ರೆ ಭಿಕ್ಷು ಭಿಕ್ಷುಣಿಯರಾಗಿ ಸಂಘ ಸೇರಿದರು. ಸಂಘಮಿತ್ರೆಯ ಪತಿ ಅಗ್ನಿಬ್ರಹ್ಮನೂ ಭಿಕ್ಷುವಾದ; ಅವರ ಮಗ ಸುಮನ ಶ್ರಾಮಣೇರನಾದ. ಹೀಗೆ ಸ್ಥವರ (ಥೇರ)ವಾದಕ್ಕೆ ರಾಜಾನುಗ್ರಹದ ಮುದ್ರೆ ಬಿದ್ದಿತು. ಅಶೋಕನ ಮೌರ್ಯ ವಂಶ ಅಳ್ವಿಕೆಗೆ ಬರುವ ಮೊದಲು ಇದ್ದ ನಂದರಾಜರಿಗೆ ಬೌದ್ಧ ಧರ್ಮದಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅವರಿಗೂ ಮುಂಚೆ ರಾಜರಾಗಿದ್ದ ಉದಾಯಿ ಮತ್ತು ಅವನ ತಂದೆ ಕೂಣಿಕ-ಅಜಾತಶತ್ರು ಇವರಿಗೆ ಜೈನಧರ್ಮದಲ್ಲೂ ಒಲವಿದ್ದಿತು. ಅಜಾತಶತ್ರುವೇನೋ ಬೌದ್ಧ ಸಂಘವನ್ನು ಪುರಸ್ಕರಿಸುತ್ತಿದ್ದ. ಆದರೆ ಬೌದ್ಧಧರ್ಮದ ಅಭ್ಯುದಯದ ಹೊಣೆಯನ್ನು ಸ್ಪಷ್ಟವಾಗಿ ವಹಿಸಿಕೊಂಡ ರಾಜರಲ್ಲಿ ಮೊದಲನೆಯವ ಅಶೋಕನೇ.

	ಹೀಗೆ ಮಗಧದಲ್ಲಿ ರಾಜಾಶ್ರಯ ಒಂದು ಪಕ್ಷವಾದರೆ, ಪಶ್ಚಿಮಭಾರತದಲ್ಲಿಯ ಭಿಕ್ಷುಗಳದು ಇನ್ನೊಂದು ಪಕ್ಷವಾಯಿತು. ಅವಂತಿಯ ಭಿಕ್ಷುಗಳು ಪ್ರತಿಭಾವಂತರಾಗಿದ್ದು, ಧರ್ಮ ಪ್ರಚಾರದಲ್ಲಿ ತುಂಬ ಶ್ರದ್ಧಾಳುಗಳಾಗಿದ್ದರು. ಬೌದ್ಧ ಧರ್ಮದ ಪ್ರವರ್ತಕ ಇಂದಿನ ನೇಪಾಳದಲ್ಲಿ ಹುಟ್ಟಿದನಾದರೂ ಅವನ ಸಂಚಾರ ಕ್ಷೇತ್ರ ಮಗಧ-ಕೋಸಲಗಳಾದರೂ ಬೌದ್ಧಧರ್ಮಕ್ಕೆ ಸ್ಪಷ್ಟವಾದ ದಾರ್ಶಾನಿಕ ನಿಲುವು ದೊರೆತದ್ದು ನೆರೆನಾಡಾದ ಅವಂತಿಯಲ್ಲಿ. ಬುದ್ಧನ ಶಿಷ್ಯರಲ್ಲಿ ಹಲವರು ಅವಂತಿಯವರು-ಮಹಾಕಾತ್ಯಾಯನ (ಮಹಾಕಚ್ಚಾನ), ಅಭಯಕುಮಾರ, ಧರ್ಮಪಾಲ, ಋಷಿದಾಸ (ಇಸಿಹಾಸ), ಋಷಿದತ್ತ (ಇಸಿದತ್ತ), ಶ್ರೋಣುಕುಕರ್ಣ (ಸೋಣ ಕುಟಿಕಣ್ಣ) ಇತ್ಯಾದಿ. ಅವಂತಿಯಲ್ಲಿ ರೂಪತಳೆದ ಬೌದ್ಧ ಧರ್ಮವೇ ಮುಂದೆ ಹರಡಿದುದು. ಅಶೋಕ ಸಿಂಹಳದ್ವೀಪಕ್ಕೆ ಕಳುಹಿಸಿದುದು ಈ ಧರ್ಮವನ್ನೇ.

	ಅಶೋಕನ ಅನಂತರ ಬಂದ ರಾಜರು ಬೌದ್ಧ ಪಕ್ಷಪಾತಿಗಳಾಗಿರಲಿಲ್ಲವಾಗಿ ಮಗಧದಲ್ಲಿ ಸುಪ್ರತಿಷ್ಠಿತವಾಗಿದ್ದ ಬೌದ್ಧಧರ್ಮ ನೆರೆಪ್ರಾಂತ್ಯಗಳಿಗೆ ತೆರಳಬೇಕಾಯಿತು. ಮಥುರೆಗೆ ಬಂದ ಬೌದ್ಧರು (ಸರ್ವಾಸ್ತಿವಾದಿಗಳು) ಅಲ್ಲಿ ಪ್ರಚಾರದಲ್ಲಿದ್ದ ಸಂಸ್ಕøತಭಾಷೆಯಲ್ಲೇ ತಮ್ಮ ಮಾಗಧೀಪ್ರಾಕೃತದ ತ್ರಿಪಿಟಕವನ್ನು ಮೂಡಿಸಿದರು. ಈ ಪಂಥದ ಬೌದ್ಧರು ವಿದಿಶಾನಗರಿಗೂ (ಈಗಿನ ಸಾಂಚಿ) ಹೋಗಿ ಅಲ್ಲಿಯೂ ಬೀಡುಬಿಟ್ಟರು. ಮೌರ್ಯಸಾಮ್ರಾಜ್ಯ ಮುರಿದುಬಿದ್ದ ಅನಂತರ ಗಾಂಧಾರದಲ್ಲಿ ರಾಜರಾಗಿದ್ದ ಯವನರು ಅವರ ಕ್ಷತ್ರಪರು ಉಜ್ಜಯಿನಿ, ಮಥುರೆಗಳಲ್ಲಿ ತಮ್ಮ ರಾಜ್ಯ ಕಟ್ಟಿಸಿಕೊಂಡರು. ಇವರೆಲ್ಲ ಬೌದ್ಧಧರ್ಮಾನುಯಾಯಿಗಳು. ಇವರಲ್ಲಿ ಒಬ್ಬನಾದ ಮಿನಂದ್ರೋಸ್ (ಮಿಳಿಂದ) ಸಾಗಲದಲ್ಲಿದ್ದ ತ್ರಿಪಿಟಕೇತರ ಪಾಳಿಸಾಹಿತ್ಯದಲ್ಲಿ ಅತ್ಯಂತ ಶ್ರೇಷ್ಠಗ್ರಂಥ ಎನಿಸಿದ ಮಿಳಿಂದ ಪ್ರಶ್ನೆಯ (ಮಿಲಿಂದ ಪಙ್ಹ) ವಸ್ತು. ಇದು ಕ್ರಿ.ಪೂ. ಮೊದಲನೆಯ ಶತಮಾನದ ಗ್ರಂಥ. ಆಕಾಲಕ್ಕೆ ಸ್ಥವಿರವಾದಿಗಳೂ ಸರ್ವಾಸ್ತಿವಾದಿಗಳೂ ಪ್ರಬಲರಾಗಿದ್ದರು. ಮಥುರ, ಗಾಂಧಾರ, ಕಾಶ್ಮೀರಗಳಲ್ಲಿ ಸರ್ವಾಸ್ತಿವಾದ ಪ್ರಾಚುರ್ಯದಲ್ಲಿದ್ದಿತು.

	ಕ್ರಿ.ಶ. ಮೊದಲನೆಯ ಶತಮಾನದ ಪೂರ್ವಾರ್ಧದಲ್ಲೇ ಕುಷಾಣರು ಭಾರತಕ್ಕೆ ಕಾಲಿಟ್ಟರು. ತಕ್ಷಶಿಲವನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ರಾಜ್ಯ ಕಟ್ಟಿದರು. ಈ ವಂಶದಲ್ಲಿ ಬಂದ ಕನಿಷ್ಕ (ಕ್ರಿ.ಶ.128) ಇಡೀ ಉತ್ತರಭಾರತವನ್ನೂ ಬಾಕ್ಪ್ರಿಯ, ಆಪ್ಘಾನಿಸ್ತಾನಗಳನ್ನು ವಶಮಾಡಿಕೊಂಡಿದ್ದ ಮಹಾಸಮರ್ಥ. ಇವನ ಕಾಲದಲ್ಲಿ ಕುಷಾಣರ ರಾಜಧಾನಿ ತಕ್ಷಶಿಲದಿಂದ ಪುರುಷಪುರಕ್ಕೆ (ಪೆಶಾವರ್) ಬಂದಿತು. ಆ ಕಾಲಕ್ಕೆ ಉತ್ತರ ದೇಶದಲ್ಲೆಲ್ಲ ಬೌದ್ಧಮತ ವಿಸ್ತøತವಾಗಿದ್ದಿತು; ಅದೂ ಸರ್ವಾಸ್ತಿವಾದ ಶಾಖೆ. ಕನಿಷ್ಕನನ್ನು ಬೌದ್ಧಧರ್ಮಕ್ಕೆ ಇಳಿಸಿಕೊಂಡವ ಸಂಸ್ಕøತಕವಿಗಳಲ್ಲಿ ಪ್ರಾಚೀನನೆನಿಸಿದೆ ಅಶ್ವಘೋಷ. ಅಯೋಧ್ಯೆಯಲ್ಲಿದ್ದ ಈ ಬ್ರಾಹ್ಮಣಭಿಕ್ಷು ಕನಿಷ್ಕನ ಬಲವಂತದಿಂದ ಪುರುಷಪುರಕ್ಕೆ ಬಂದ. ಈತನ ಪ್ರಭಾವದಿಂದ ಕನಿಷ್ಕನಿಗೂ ಅಶೋಕನಂತೆ ಬಲವಾದ ಶ್ರದ್ಧೆಮೂಡಿ, ಬೌದ್ಧಧರ್ಮದ ಪ್ರಸಾರಕ್ಕೆ ಕನಿಷ್ಕ ಬಹುವಾಗಿ ಶ್ರಮಿಸಿದ. ಆದರೆ ಈ ಕಾಲದಲ್ಲಿ ಬೌದ್ಧವಾಙ್ಮಯ ಸಂಸ್ಕøತ ಭಾಷೆಯನ್ನು ವಿಶೇಷವಾಗಿ ಬಳಸಿಕೊಳ್ಳತೊಡಗಿತು. ಕನಿಷ್ಕ ನಾಲ್ಕನೆಯ ಮಹಾಸಂಗೀತಿಯನ್ನು (ಬೌದ್ಧಭಿಕ್ಷುಗಳ ಸಭೆ) ಸೇರಿಸಿ ಧರ್ಮನಿಶ್ಚಯ ಮಾಡಿದ. ಆದರೆ ಮೊತ್ತಮೊದಲಿಗೆ ಈ ಸಂಗೀತಿಯಲ್ಲಿ ವ್ಯಕ್ತಪಟ್ಟ ವಿಷಯವೆಂದರೆ ಬೌದ್ಧಧರ್ಮಾನುಯಾಯಿಗಳಲ್ಲಿ ಸಮನ್ವಯ ಮಾಡಲಾಗದ ಭಿನ್ನಮತಗಳು ಎದ್ದಿದ್ದುವೆಂಬುದು. ಈ ಸಂಗೀತಿಯಲ್ಲಿ ಸರ್ವಾಸ್ತಿವಾದಿಗಳೇ ಪ್ರಬಲರಾಗಿದ್ದರೂ ಮಹಾಯಾನ ಮತದ ಅಂಕುರಾರ್ಪಣವಾಯಿತು.

	ಅದೇ ಕಾಲಕ್ಕೆ ದಕ್ಷಿಣದ ವಿದರ್ಭದಲ್ಲಿ ನಾಗಾರ್ಜುನ (ಕ್ರಿ.ಶ.150) ಶ್ರೀಪರ್ವತದಲ್ಲಿದ್ದುಕೊಂಡು (ನಾಗಾರ್ಜುನ ಕೊಂಡ) ಮಾಧ್ಯಮಿಕ ಪಂಥ ಪ್ರವರ್ತಿಸಿದ. ಇದು ಮಹಾಯಾನದ ಒಂದು ಪ್ರಕಾರ. ಕ್ರಿ.ಶ. ಮೊದಲನೇ ಶತಮಾನದ ಪೂರ್ವದಲ್ಲೇ ಸರ್ವಾಸ್ತಿವಾದಿಗಳಿಂದ ಭಿನ್ನರಾಗಿ ಮಹಾಸಾಂಘಿಕರು ವ್ಯವಸ್ಥಿತರಾಗಿದ್ದರು. ಇವರಿಂದಲೇ ಮುಂದೆ ಮಹಾಯಾನ ಪಂಥ ಬೆಳೆಯಿತು. ಮಹಾಯಾನದಲ್ಲಿ ಮಾಧ್ಯಮಿಕಮತವೇ ಪ್ರಾಚೀನವಾದುದು. ನಾಗಾರ್ಜುನನ ಶಿಷ್ಯನೆಂದು ಹೇಳುವ ಅಸಂಗನಿಂದಾಗಿ ಯೋಗಾಚಾರಮತ ಬೆಳೆಯಿತು. ಶೂನ್ಯತೆ, ಸಂವೃತಿ-ಪರಮಾರ್ಥಸತ್ಯ, ಬೋಧಿಸತ್ತ್ವರ ಕಲ್ಪನೆ, ವಾರಮಿಗಳು, ಬುದ್ಧಪೂಜನ ಮುಂತಾದ ಹೊಸ ತತ್ತ್ವಗಳು ಮೂಡಿ ಬಂದುವು. ಪ್ರಾಚೀನವಾಗಿದ್ದ ಸ್ಥವಿರವಾದ ಹಿಂದುಳಿಯಿತು; ದೂರ ದೇಶಗಳಾದ ಸಿಂಹಳ, ಕಾಂಬೋಡಿಯ, ಥೈಲ್ಯಾಂಡ್, ಬರ್ಮಾದೇಶಗಳಿಗೆ ಆಗಲೇ ಹೋಗಿದ್ದಿತಾಗಿ ಅಲ್ಲಿ ಮಾತ್ರ ಪ್ರಬಲವಾಗಿ ಉಳಿಯಿತು. ಕ್ರಿ.ಶ. ಮೂರನೆಯ ಶತಮಾನದಿಂದಾಚೆಗೆ ಮೂರು ಶತಕಗಳ ಪರ್ಯಂತ ಮಹಾಯಾನ ಬೌದ್ಧ ಪಂಥವೇ ಭಾರತದಲ್ಲಿ ಪ್ರಬಲವಾಯಿತು. ಮುಂದಿನ ತಲೆಮಾರಿನಲ್ಲಿ ತಂತ್ರ ಯಾನ, ಮಂತ್ರಯಾನಗಳು ಬೆಳೆದುವು.

	ಮುಂದೆ 4-5ನೆಯ ಶತಮಾನದಿಂದ 7-8ನೆಯ ಶತಮಾನದ ತನಕ ಭಾರತದಲ್ಲಿ ಬಲಿಷ್ಠರಾಗಿದ್ದ ಗುಪ್ತರಾಜರು ಭಾಗವಂತಪಂಥ ಅವಲಂಬಿಸಿದ್ದರು. ಆದರೂ ಬೌದ್ಧಮತದ ವಿಚಾರದಲ್ಲಿ ಅಸಹಿಷ್ಣುಗಳಾಗಿರಲಿಲ್ಲ. ಐದನೆಯ ಶತಮಾನದಲ್ಲಿ (405ರ ಸುಮಾರಿಗೆ) ಇಲ್ಲಿಗೆ ಬಂದ-ಫಾಹಿಯಾನ್ ಬೌದ್ಧರು, ಹಿಂದುಗಳು ತುಂಬ ಅನೋನ್ಯವಾಗಿದುದ್ದನ್ನು ಕಂಡ. ಸಮುದ್ರಗುಪ್ತ ವೈದಿಕಮತ ಪಕ್ಷಪಾತಿಯಾಗಿದ್ದರೂ ಪಂಜಾಬಿನಲ್ಲೂ ಬೌದ್ಧಧರ್ಮ ಪ್ರಬಲವಾಗಿದ್ದಿತು. ಮಥುರೆಯೊಂದರಲ್ಲೇ ಇಪ್ಪತ್ತು ಬೌದ್ಧವಿಹಾರಗಳಿದ್ದುವೆಂದು ಫಾಹಿಮಾನ್ ಬರೆದಿದ್ದಾನೆ. ಥಾಣೇಶ್ವರದ ಶ್ರೀಹರ್ಷ ಮಹಾರಾಜಾಧಿರಾಜನಾದ ಮೇಲೆ ಎಂದರೆ ಕ್ತಿ.ಶ. 606ರಲ್ಲಿ ಮಹಾಯಾನ ಬೌದ್ಧಮತಕ್ಕೆ ಹೆಚ್ಚು ಉತ್ತೇಜನ ದೊರಕಿತು. ಸೂರ್ಯೋಪಾಸಕವಾಗಿದ್ದ ಈತನನ್ನು ಬೌದ್ಧಧರ್ಮಕ್ಕೆ ಒಲಿಸಿಕೊಂಡವ ಚೀನೀಯಾತ್ರಿಕ ಮುವಾನ್‍ಛ್ವಾಂಗ್. ಹರ್ಷ ನೂರಾರು ಸ್ತೂಪಗಳನ್ನು ಕಟ್ಟಿಸಿದ. ರಾಜಧಾನಿಯಾಗಿದ್ದ ಕನ್ಯಾಕುಬ್ಜವೊಂದರಲ್ಲೇ ಒಂದುನೂರು ಬೌದ್ಧವಿಹಾರಗಳಿದ್ದುವು. ಆದರೆ ಮುಂದಿನ ತಲೆಮಾರಿನಲ್ಲಿ ಭಾರತದಲ್ಲಿ ಬೌದ್ಧಮತದ ಅವನತಿ ಮೊದಲಾಯಿತು. ನುಂಗಿ ಜೀರ್ಣಿಸಿಕೊಂಡುವು. ಎಂಟು-ಒಂಬತ್ತನೆಯ ಶತಮಾನದ ಸುಮಾರಿಗೆ ಶಂಕರಾಚಾರ್ಯರ ಕಾಲದಲ್ಲಿ ಬೌದ್ಧಮತ ಆಗಲೇ ತನ್ನ ವೈಶಿಷ್ಟ್ಯವನ್ನು ಕಳೆದುಕೊಂಡಿತು.

	ಅಶೋಕ ಮತ್ತು ಕನಿಷ್ಕನ ಕಾಲದಲ್ಲಿ ಬೌದ್ಧಮತ ಪ್ರಚಾರಕಾರ್ಯ ಸಾಗಿತು. ಮೂರನೆಯ ಶತಮಾನದಲ್ಲಿ ಬೌದ್ಧಧರ್ಮ ಸಿಂಹಳ ಸೇರಿ, ಊರ್ಜಿತವಾಯಿತು. ಸ್ಥವಿರವಾದ ಅಲ್ಲಿ ದೃಢವಾಗಿ ಬೇರೂರಿತು. ಬರ್ಮಾದೇಶಕ್ಕೆ ಭಾರತದಿಂದ ಮಹಾಯಾನ ಮತ ಮೊದಲು ಪ್ರವೇಶ ಮಾಡಿತಾದರೂ ಅಲ್ಲಿ ಬೆಳೆದದ್ದು ಸಿಂಹಳದಿಂದ ಬಂದ ಸ್ಥವಿರವಾದವೇ. ಅಲ್ಲಿಯ ಬೌದ್ಧಧರ್ಮದಲ್ಲಿ ಭಾರತದಿಂದ ಬಂದ ಬ್ರಾಹ್ಮಣ ಧರ್ಮದ ಪ್ರಭಾವ ಅಂತರ್ಗತವಾಗಿದೆ. ಕುಚಪ್ರಾಂತ್ಯದ ಕುಮಾರ ಜೀವನೆಂಬ ಭಿಕ್ಷು (ನೋಡಿ- ಕುಮಾರ-ಜೀವ) ಮಹಾಯಾನ ಪಂಥದವ. ನಾಲ್ಕನೆಯ ಶತಮಾನದ ಅಂತ್ಯಭಾಗದಲ್ಲಿ ಈತನನ್ನು ಬಂಧಿಸಿ ಚೀನಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಈತ ಮತ್ತು ಈತನ ಸಹಚರರು ತಮಗೆ ಪರಿಚಯವಿದ್ದ ಬೌದ್ಧ ವಾಙ್ಮಯವನ್ನು ಚೀನೀ ಮತ್ತಿತರ ಮಧ್ಯ ಏಷ್ಯಾ ಭಾಷೆಗಳಿಗೆ ಪರಿವರ್ತನೆ ಮಾಡಿದರು. ಕ್ರಿ.ಪೂ. ಮೊದಲನೆಯ ಶತಮಾನದಲ್ಲೇ ಬೌದ್ಧಧರ್ಮ ಚೀನವನ್ನು ಮುಟ್ಟಿತೆಂದು ತಿಳಿದುಬರುತ್ತದೆ. ಆದರೆ ಕ್ರಿ.ಶ. ಒಂದು ಮತ್ತು ಎರಡನೆಯ ಶತಮಾನಗಳಲ್ಲಿ ಅದು ಬೆಳೆಯಲಾರಂಭಿಸಿದ್ದು. ಕುಮಾರ ಜೀವ ಮುಂತಾದವರ ಶ್ರಮದಿಂದಾಗಿ ಚೀನೀ ತ್ರಿಪಿಟಕ ಸಿದ್ಧವಾಯಿತು. ಅಲ್ಲಿ ಮೊದಲೇ ಇದ್ದ ತಾವೋಧರ್ಮ, ಕುಂಗ್-ಫು-ತ್ಸೆ ಧರ್ಮಗಳ ಪ್ರಭಾವವೂ ಒದಗಿ ಚೀನೀ ಬೌದ್ಧಧರ್ಮ ವಿಶಿಷ್ಟವಾಗಿ ನಿಂತಿತು. ಕ್ರಿ.ಶ. 845ರಲ್ಲಿ ಬೌದ್ಧಮತದ ಮೇಲೆ ಚಕ್ರವರ್ತಿಯ ಕಾಕದೃಷ್ಟಿ ಬಿದ್ದು ಅಲ್ಲಿಂದಾಚೆಗೆ ಈ ಧರ್ಮ ಕೆಳಮುಖವಾಯಿತು. 

	ಭಾರತದಲ್ಲಿ ಬೌದ್ಧಧರ್ಮ ಇತರ ಧರ್ಮಗಳ ವಿರೋಧ ಎದಿರುಸಲಾರದೆ ಕಳೆಗುಂದಿತಾದರೂ ಸುಮಾರು ಹನ್ನೆರಡನೆಯ ಶತಮಾನದ ತನಕ ಬಂಗಾಳದಲ್ಲಿ ಪಾಲರಾಜರ ನೆರವಿನಿಂದ ಉಳಿದಿತ್ತು. ಬ್ರಾಹ್ಮಣ ಮೂಲವಾದ ಹಲವಾರು ದೇವತೆಗಳು, ಮಂತ್ರಶಾಸ್ತ್ರ ಇವನ್ನು ಅರಗಿಸಿಕೊಂಡು ವಜ್ರಯಾನ ಪ್ರವೃತ್ತವಾಯಿತು. ಕ್ರಿ.ಶ. 747ರಲ್ಲಿ ಪದ್ಮಸಂಭವನೆಂಬ ಭಿಕ್ಷು ಬಂಗಾಳದಿಂದ ಈ ವಜ್ರಯಾನ ಬೌದ್ಧಪಂಥವನ್ನು ಟಿಬೆಟ್ ದೇಶಕ್ಕೆ ಕೊಂಡೊಯ್ದ. ಅಲ್ಲಿ ಮೊದಲೇ ಇದ್ದ ಬೋನ್‍ಮತದ ಪ್ರಕ್ರಿಯೆಗಳು, ಸರ್ವಾಸ್ತಿವಾದದ ವಿನಯ, ಮಾಧ್ಯಮಿಕ_ಯೋಗಾಚಾರ ದರ್ಶನ, ವಜ್ರಯಾನದ ದೀಕ್ಷೆ_ ಇವೆಲ್ಲವೂ ಒಂದಾಗಿ ಲಾಮಾ ಬೌದ್ಧಮತ ಅಲ್ಲಿ ಬೆಳೆಯಿತು.

	ಕ್ರಿ.ಶ. 552ರಲ್ಲಿ ಕೊರಿಯಾ ದೇಶದ ಮೂಲದ ಬೌದ್ಧಧರ್ಮ ಜಪಾನನ್ನು ಮುಟ್ಟಿತು. ಆರನೆಯ ಶತಮಾನದ ಅನಂತರ ಬಹುಶಾಖೆಗಳಾಗಿ ಹರಡಿ ಬೇರೂರಿತು. ರಾಜಕುಮಾರ ಷೋ-ಟೋಕು (592-628) ಮುಂತಾದವರ ನೆರವಿನಿಂದ ಮಹಾಯಾನ ಬೌದ್ಧಧರ್ಮ ವಿಶಿಷ್ಟವಾಗಿ ಬೆಳೆಯಲಾರಂಬಿಸಿತು. ಷಿನ್, ಷೋಗುನ್, ತೆಂಡಾಯ್, ಅಮಿದಮತ, ಬುದ್ಧಭೂಮಿಮತ, ಧ್ಯಾನಮತ ಮುಂತಾದ ಶಾಖೆಗಳು ಹರಡಿದುವು. ಇವುಗಳಲ್ಲಿ ಧ್ಯಾನಪಂಥ(ಷೆನ್) ಪ್ರಸಿದ್ಧವಾಗಿದೆ. ಬೋಧಿಧರ್ಮ (470-534) ಎಂಬ ಕಾಂಚೀಪುರದ ಭಿಕ್ಷು ಚೀನಕ್ಕೆ ಬಂದು 515 ರಿಂದ 526ರ ತನಕವೂ ಅಲ್ಲಿದ್ದು ಧ್ಯಾನ(ಛಾ-ನ್) ಪಂಥವನ್ನು ಪ್ರವರ್ತಿಸಿದ. ಕುಮಾರಜೀವನ ಚೀನೀ ಶಿಷ್ಯನಾಗಿದ್ದ ಟವೋ-ಷೆಂಗ್(360_434) ಎಂಬಾತ ಈ ಧ್ಯಾನಪಂಥದ ಆದ್ಯ ಪ್ರವರ್ತಕನೆಂದು ಹೇಳುತ್ತಾರೆ. ಅಂತೂ ಷೆನ್ ಸಂಪ್ರದಾಯದಲ್ಲಿ ಬೋಧಿಧರ್ಮನಿಂದ(ಜಪಾನೀ ಭಾಷೆಯಲ್ಲಿ ದರುಮ) ಆರಂಭವಾದ ಆಚಾರ್ಯಪರಂಪರೆಯನ್ನು ಗ್ರಹಿಸಿದ್ದಾರೆ. ಚೀನದಿಂದ ಈ ಪಂಥ ಹನ್ನೆರಡನೆಯ ಶತಮಾನದಲ್ಲಿ ಜಪಾನಿನಲ್ಲೆಲ್ಲ ಪ್ರಬಲವಾಯಿತು. ಇಲ್ಲಿ ಅವತಂಸಕ ಸೂತ್ರ, ಅಳಕಾವತಾರ ಸೂತ್ರ ಮುಂತಾದವು ಸನ್ಮಾನ್ಯವಾದುವು.

(ನೋಡಿ- ಅಶೋಕ)
(ನೋಡಿ- ಬೌದ್ಧ-ಪಂಥಗಳು)
(ನೋಡಿ- ಮಹಾಯಾನ)
(ನೋಡಿ- ಯೋಗಾಚಾರ)
(ನೋಡಿ- ವೈಭಾಷಿಕರು)
(ನೋಡಿ- ಹೀನಯಾನ)		(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ